ಕೀರ್ತನೆಗಳು

ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

ಸತ್ಯವಂತರ ಸಂಗವಿರಲು ತೀರ್ಥವೇತಕೆ
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ||ಪ||

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ||೧||

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ||೨||

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||೩||




ದಾಸದಾಸರ ಮನೆಯ ದಾಸಾನುದಾಸ ನಾನು
ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಪ||

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು||೧||

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು ||೨||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ| |೩||

ಕೇಶವನೊಲುಮೆಯು ಆಗುವ ತನಕ

ಕೇಶವನೊಲುಮೆಯು ಆಗುವ ತನಕ
ಹರಿ ದಾಸರೊಳಿರುತಿರು ಹೇ ಮನುಜ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ ಕಾಶಿಗೆ ಹೋದರೆ ಹೋದೀತೇ
ಶ್ರೀಶನ ಭಕುತರ ದೂಷಿಸಿದ ಫಲ ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಮಾಡಿದ ಫಲ ಕ್ಲೇಶವ ಗೊಳಿಸದೆ ಇಟ್ಟೀತೆ
ಭೂಸುರ ಸ್ವವ ಕ್ರಾಸ ಮಾಡಿದ ಫಲ ಏಸೇಸು ಜನುಮಕು ಬಿಟ್ಟೀತೆ||1||

ಜೀನನ ವಶದೊಳು ನಾನಾ ದ್ರವ್ಯವಿರೆ ದಾನ ಧರ್ಮಕೆ ಮನಸಾದೀತೇ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯವಳಿ ಹೋದೀತೇ
ಮಾನಿನಿ ಮನಸು ನಿಧಾನವಿರದಿರೆ ಮಾನಾಭಿ ಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ ಹೀನಗೆ ಮುಕುತಿಯು ದೊರಕೀತೆ||2||

ಕರುಣಾಮ್ರುತದಾಭರಣವ ಧರಿಸಿದ ಪರಮಗೆ ಸಿರಿಯು ತಪ್ಪೀತೆ
ಕರುಣಾ ಪಾಶದ ಉರವಣೆ ತೊರೆದಾತಗೆ ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನು ಆಚರಿಪ ಯೋಗ್ಯಗೆ ಗುರು ಉಪದೇಶವು ತಪ್ಪೀತೆ
ವರವೇಲಾಪುರ ದಾದಿಕೇಶವನ ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ||3||

ಲಾಲಿ ಪಾವನ ಚರಣ ಲಾಲಿ ಅಘ ಹರಣ


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ