ಜಾನಪದ ಗೀತೆಗಳು


🌸ಅಮ್ಮಾನ ಮನೆಯಿಂದ 🌸

ಅಮ್ಮಾನ ಮನೆಯಿಂದ ಅತ್ತೇಯ  ಮನೆಗೋಗಿ ಮುತ್ತಂತೆ ಬಾಳು ನನ್ನ ತಂಗಿ ಮುತ್ತಿನುಂಗುರದ ಮಣಿಯಾಗಿ ll

ಮರಿಬೇಡ ತವರೂರು  ವರ್ಷಕ್ಕೆ ಒಮ್ಮೆ ತೇರು
ಕಷ್ಟ ಇರಲಿ ನೂರು ಮರಿಬೇಡ ಅಣ್ಣನ ಸೂರು llಅಮ್ಮಾನll

ನೆರೆಮನೆ ಸಂಗ ಬೇಡ ಅದು ವಿರಸಕ್ಕೆ ದಾರಿ ನೋಡ
ಕೈಯೊಳಗಿರಲಿ ಮನಸು ಕಾಣಬೇಡ ಹುಚ್ಚು ಕನಸು llಅಮ್ಮಾನll

ನಗ್ ನಗ್ತಾ ಹೇಳೋರೆಲ್ಲಾ ನಿನ್ನ ಕಷ್ಟಕ್ಕೆ ಬರುವರಿಲ್ಲ
ಎದೆಯೊಳಗಿರಲಿ ಭೀತಿ ಮೆರೆಯದೆ ಎಂದಿಗೂ ನೀತಿllಅಮ್ಮಾನll

ಸುತ್ತೆಲ್ಲ ಕಣ್ಣಿರಲಿ ನಿನ್ನ ಮಾತಲ್ಲಿ ಮಿತಿಯಿರಲಿ
ಪಡದಿರು ಎಂದಿಗು ಅನುಮಾನ ಬಿಡದಿರು ನಿನ್ನ ಬಿಗುಮಾನ llಅಮ್ಮಾನll


-ಜಾನಪದ




🌸ದುಡ್ಡು ಕೊಟ್ಟರೆ ಬೇಕಾದ್ದು ...🌸

ದುಡ್ಡು ಕೊಟ್ಟರೆ ಬೇಕ್ಕಾದ್ದು ಸಿಗತೈತಿ ಈ ಜಗದಲಿ ಕಾಣೋ
ಹಡೆದ ತಾಯಿಯನು ಕಳ ಕೊಂಡ ಮ್ಯಾಲ ಮತ್ತೆ ಸಿಗುವಳೇನೊ
ತಮ್ಮ ಮರಳಿ ಬರುವಳೇನೋ ll

ಒಂಬತ್ತು ತಿಂಗಳ ಸಂಕಟ ನೀಡಿ ಹೊಟ್ಟ್ಯಾಗ ಬೆಳೆದೆಲ್ಲೋ
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ
ಬರುವ ಕಷ್ಟಗಳ ಸಹಿಸಿದ ತಾಯಿ ನಿನ್ನ ನಂಬಿತಲ್ಲೋ
ತಾನು ಕೊರಗಿ ನಿನ್ನ ಕೋಣ ಬೆಳಸಿದಂಗೇ ಬೆಳೆಸಿ ಬಿಟ್ಟಳಲ್ಲೋ
ಒಬ್ಬ ಮಗ ನೀ ಆಸರಾದಿ ಅಂತ ತಾಯಿ ತಿಳದಿತಲ್ಲೋ ಜೀವ ಇಟ್ಟಿತ್ತು ನಿನ ಮ್ಯಾಲೋll ದುಡ್ಡು ll

ಕೂಲಿ ನಾಲಿ ಮಾಡಿ ಶಾಲೆ ಕಳಿಸಿದಳು ಜಾಣನಾಗಲೆಂತ
ಚಿನ್ನದಂತ ಒಂದು ಹೆಣ್ಣು ನೋಡ್ಯಾಳು
ನಿನ್ನ ಮದುವಿಗಂತ
ಸಾಲ ಶೂಲ ಮಾಡಿ ಮದುವಿ ಮಾಡಿದಳು ಬಳ್ಳಿ ಹಬ್ಬಲೆಂತ
ಮೂಮ್ಮಕ್ಕಳನು ಎತ್ತಿ ಆಡಿಸುವ
ಚಿಂತಿಯೊಳಗ ಇತ್ತ
ಮುಪ್ಪಿನ ತಾಯಿ ಏನೇನೋ ಕನಸ ಕಟಕೊಂಡು  ಕುಂತಿತ್ತ ಕನಸು ಕನಸಾಗಿ ಉಳಿತಾllದುಡ್ಡುll

ಮಗಳಿಗಿಂತ ಹೆಚ್ಚಿನ ಪ್ರೀತಿಲಿ  ಸೊಸಿನ  ಕಂಡಳಲ್ಲಾ
ಮೆಚ್ಚಿನ ಸೊಸೆಯು ತಾಯಿಯ ಹಂಗ ನೋಡಿ ಕೊಳ್ಳಲಿಲ್ಲ
ಸೋತ ಶರೀರಕ ಸುಖವೆಂಬದು ಈ ಸೊಸಿಯು ನೀಡಲಿಲ್ಲ
ಉಂಡು ಬಿಟ್ಟಿರುವ  ಎಂಜಲ ಕೂಳ ತಾಯಿಗಾಕ್ಯಳಲ್ಲ
 ಮಗನ ಮೋಹಕ ಹಳಸಿದ ಕೂಳ ತಾಯಿ ತಿಂದಳಲ್ಲ
ಅದನು ಯಾರಿಗೇಳಲಿಲ್ಲ llದುಡ್ಡುll

ಉಪವಾಸ ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರತಾಳೊ
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿನುತಾಳೊ
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು
ಅವ್ ಮಾನ ನಮಗಂತ ತನ್ನ ಮನೆಯಿಂದ ಹೊರಗೆ ಹಾಕ್ಯಾಳು
ಮಗನಿಗೇಳಿದರ ನೋವು ಆ ಜೀವಕ ಎಂದು ತಿಳಿದಾಳು ತಾಯಿ ನಿನ್ನಿಂದ
ದೂರಾಳು llದುಡ್ಡುll

ಮಗ ಇದ್ದರು ಹಡೆದ ತಾಯಿ ಪರದೇಶಿ ಆಗಿಹಳು
ಅಲ್ಲಿ ಇಲ್ಲಿ ತಾ ಭಿಕ್ಷೆಯ ಬೇಡಿ ದಿನಗಳ ಕಳೀತಾಳು
ಬಂದ ನೋವುಗಳ  ಸಹಿಸುತ ಮಗನ ಚಿಂತೇ ಮಾಡುತಾಳು
ಕಣ್ಣು ಕಾಣಲಿಲ್ಲ ಕಿವಿಯು ಕೇಳಲಿಲ್ಲ ಎಷ್ಟು ದಿನ ಇರೂತಾಳು
ನನ್ನ ಮಗನಿಗೆ  ಚನ್ನಾಗಿ ಇಡು ಅಂತ ಮಹಾಂತನ ಬೇಡ್ಯಾಳು
ತಾಯಿ ಬೀದ್ಯಾಗ ಸತ್ತಾಳು llದುಡ್ಡುll



 🌸ಆಷಾಢ ಮಾಸ 🌸

ಆಷಾಢ ಮಾಸ ಬಂದಿತಮ್ಮ
ಅಣ್ಣ ಬರಲಿಲ್ಲ ಕರಿಯಾಕ
ಸುವ್ವಲಾಲೀ ಸುವ್ವಾಲಿ ll

ಹೊತ್ತು ಮುಳುಗಿ ಕತ್ತಲಾಗಿ
ದೀಪ ಹಚ್ಚೋ ವೇಳೆಯಾಗಿ
ಅಣ್ಣ ಬರಲಿಲ್ಲ ಕರಿಯಾಕ
ಸುವ್ವಲಾಲಿ ಸುವ್ವಾಲಿ llಆಷಾಢll

ರೊಟ್ಟಿ ಬುತ್ತಿ ಮಾಡಿಕೊಂಡು
ಎತ್ತಿನ ಬಂಡಿ ಹೂಡಿ ಕೊಂಡು
ಎಂದು ಹೊಗೇನಾ ತವರೀಗೆ
ಸುವ್ವಲಾಲಿ ಸುವ್ವಾಲಿ llಆಷಾಢll

ಹಿಂದಿನ ಹೊತ್ತು ಹಿಂದೇ ಇರಲಿ
ಮುಂದಿನ ಹೊತ್ತು ಇಂದೇ ಬರಲಿ
ಎಂದು ನೋಡೇನಾ ತಾಯಿಯ ಮೋರೆ
ಸುವ್ವಾಲಾಲಿ ಸುವ್ವಾಲಿ llಆಷಾಢll



ಒಳಿತು ಮಾಡು
ಮನುಷಾ..!
ನೀ ಇರೋದು ಮೂರು ದಿವಸ...!
ಉಸಿರು ನಿಂತ ಮೇಲೆ
ಹೆಸರು ಹೇಳುತ್ತಾರಾ...!
ಹೆಣ ಅನ್ನುತ್ತಾರಾ..!
ಮಣ್ಣಾಗಾ ಹೂಳುತ್ತಾರಾ...!
ಚಟ್ಟ ಕಟ್ಟುತ್ತಾರಾ...!
ನಿನ್ನ ಸುಟ್ಟುಹಾಕುತ್ತಾರಾ...!

ಒಳಿತು ಮಾಡು
ಮನುಷಾ...!
ನೀ ಇರೋದು ಮೂರು ದಿವಸ...!

ಮೂರು ದಿನದ ಸಂತೆ,
ನಗು ನಗುತಾ ಬಾಳಬೇಕು...!
ದ್ವೇಷ ಎಂಬ ಕಂತೆ,
ನೀನು ಸುಟ್ಟು ಹಾಕಬೇಕು..!

ಪ್ರೀತಿ, ಪ್ರೇಮ ಹಂಚಿ,
ನೀನು ಹೋಗಬೇಕು ಅಲ್ಲಿ..!
ಸತ್ತ ಮೇಲೂ ನಿನಗೆ,
ಹೆಸರು ಉಂಟು ಇಲ್ಲಿ..!

ಭೂಮಿಯಲ್ಲಿರೋದು ಬಾಡಿಗೆ ಮನ್ಯಾಗೆ,
ಮ್ಯಾಲೆ ಹೋಗಬೇಕು,
ನಮ್ಮ ಸ್ವಂತ ಮನೆಗೆ...!

ಬರಲು ಏನು ತಂದೆ..?
ಬರದು ಏನು ಹಿಂದೆ..!

ಹೇ... ಒಳಿತು ಮಾಡು
ಮನುಷಾ...!
ನೀ ಇರೋದು ಮೂರು ದಿವಸ...!

ಸ್ವರ್ಗ-ನರಕ ಎಲ್ಲಾ,
ಮೇಲಿಲ್ಲಾ ಕೇಳು ಜನಕಾ..!
ಇಲ್ಲೇ ಕಾಣಬೇಕು,
ಉಸಿರಿರೋ ಕೊನೆ ತನಕಾ..!

ನಾನು ನಾನು ಎಂದೂ,
ಮೆರೆಯಬೇಡ ಮೂಢಾ..!
ನಾನು ಎಂಬುದು ಮಣ್ಣು,
ಮರೆತು ಹೋಗಬೇಡ..!

ದ್ವೇಷ ಎಂಬ ವಿಷವ,
ಕುಡಿಯ ಬೇಡ ಮೂಢಾ..!
ಪ್ರೀತಿ ಅಮೃತವ,
ಒಮ್ಮೆ ಕುಡಿದು ನೋಡಾ..!
ಅದೇ ಸ್ವರ್ಗಕ್ಕೀಡಾ...!
ಮನುಜನಾಗಿ ಬಾಳ...!

ಹೇ...ಒಳಿತು ಮಾಡು
ಮನುಷಾ...!
ನೀ ಇರೋದು ಮೂರು
ದಿವಸ...!
ಉಸಿರು ನಿಂತ ಮೇಲೆ,
ನಿನ್ನ ಹೆಸರು ಹೇಳುತ್ತಾರಾ...!
ಹೆಣ ಅನ್ನುತ್ತಾರಾ...!
ಮಣ್ಣಾಗ ಹೂಳುತ್ತಾರಾ...!
ಚಟ್ಟ ಕಟ್ಟುತ್ತಾರಾ...!
ನಿನ್ನ ಸುಟ್ಟು ಹಾಕುತ್ತಾರಾ...!


🌸ಒಮ್ಯಾರ ನನ್ನ ಅಣ್ಣ ಬರಲಿಲ್ಲ 🌸

ಒಮ್ಯಾರ ನನ್ನ ಅಣ್ಣ ಬರಲಿಲ್ಲ
ಯಾರ ಮುಂದೇ ಹೇಳಲೆವ್ವ ಇದನೆಲ್ಲ ಕೊರಗೈತೀ ನನ್ನ ಎದೆಯಾಗ ಮರುಗೂತ ಕುಂತಿನವ್ವಾ ಮೂಲ್ಯಾಗ
ಏನಂತ ಹೇಳಲವ್ವ ಮಂದ್ಯಾಗ
ಎಂಗಂತ ಇರಲವ್ವ ಮನೆಯಾಗllಒಮ್ಯಾಗ ll

ಅತ್ತೀಗೆ ಸೆರಗ ಹಿಡುದಾನ ಆಕಿಯಾಳಾಗಿ ದುಡದಾನ
ಆಕಿಯ ಕೈ ಗೊಂಬೆಯಾಗ್ಯಾನ
ತಂಗೀನ  ಮರೆತು ಹೋಗ್ಯಾನ
ಹಬ್ಬ ಹರಿದಿನ ಅಂದಾರ
ಗಂಡಾನ ಮನೆಯವ್ರು ಕೇಳ್ತಾರ
ನನ್ನ ಹಂಗಿಸಿ ನಗತಾರ
ನನ್ನ ತವರ ಬೈತಾರ llಒಮ್ಯಾರll

ಹಿರೇರಿಗೆ ಹೇಳಿದರೆ ಕೇಳೋರಿಲ್ಲ
ಯಾರಿಗೆ ಯಾರು ತಿಳಿದಿಲ್ಲ
ದೇವರು ಕರುಣ ತೋರಿಲ್ಲ
ಹೆಣ್ಣೀನ ಬಾಳು ಗೋಳೆಲ್ಲ
ತವರೀನ ನೆನೆಪು ಮರಿಲಿಲ್ಲ
ಬಂಡಗೆಟ್ಟ ಬದುಕಿಗೆ ಬೆಲೆಯಿಲ್ಲ
ಬಿದ್ದೈತೇ ನನ್ನ ದಾರ್ಗೇ ಮುಳ್ಳೆಲ್ಲ
ತುಂಬೈತೆ ಕಣ್ಣಾಗ ನೀರೆಲ್ಲ llಒಮ್ಯಾರll





ಮೂಡಲ್ ಕುಣಿಗಲ್ ಕೆರೆ 🌸


ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
ಮೂಡಿ ಬರ್ತಾನೆ ಚಂದಿರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಾಮ
ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
ಭಾವ ತಂದಾವನೆ ಬಣ್ಣದ ಸೀರೆ
ತಾನಂದನೋ ಭಾವ ತಂದಾವನೆ ಬಣ್ಣದ ಸೀರೆ
ನಿಂಬೆಯ ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ
ಅಂದಾ ನೋಡಲು ಶಿವ ಬಂದ್ರು
ತಾನಂದನೋ ಅಂದಾ ನೋಡಲು ಶಿವ ಬಂಡ್ರು

ಅಂದಾವ ನೋಡಲು ಶಿವ ಬಂದ್ರು ಶಿವಯೋಗಿ
ಕಬ್ಬಕ್ಕಿ ಬಾಯ ಬೀಡುತಾವೆ
ತಾನಂದನೋ ಕಬ್ಬಕ್ಕಿ ಬಾಯ ಬೀಡುತಾವೆ
ಕಬ್ಬಕ್ಕಿನೆ ಬಾಯಿ ಬೀಡುತಾವೆ ನಿಬಿಡದ
ಗಬ್ಬದಾ ಹೊಂಬಾಳೆ ನಡುಗ್ಯಾವೆ
ತಾನಂದನೋ ಗಬ್ಬದಾ ಹೊಂಬಾಳೆ ನಡುಗ್ಯಾವೆ

ಹಾಕಾಕ್ಕೊಂದ್ ಆರಗೋಲು ನೂಕಾಕ್ಕೊಂದ್ ಊರಗೋಲು
ಬೊಬ್ಬೆ ಹೊಡೆದಾವೆ ಬಾಳೆಮೀನು
ತಾನಂದನೋ ಬೊಬ್ಬೆ ಹೊಡೆದಾವೆ ಬಾಳೆಮೀನು
ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗ
ಗುಬ್ಬಿ ಸಾರಂಗ ನಗುತಾವೆ
ತಾನಂದನೋ ಗುಬ್ಬಿ ಸಾರಂಗ ನಗುತಾವೆ



 🌸ಎಲೆ ಕೆಂಚಿ ತಾರೆ....🌸



ಎಲೆ ಕೆಂಚಿ ತಾರೆ ನಮ್ಮನೆತಂಕ ಬಾರೆ
ನೀನು ಬಾರದೇ ಹೋದರೆ ನಾ ಕೆರೆಬಾವಿ ಪಾಲೆ ।।
ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಈ ಊರೆಲ್ಲ ಬಳಸೋದು ಆ ಬಾವಿ ನೀರ ।
ಬಾರೋ ಮನೆಗ್ಹೋಗಾನ ।। ಎಲೆ ।।

ನೀನು ಬಂದರೆ ನಮ ಕೇರಿ ಒಂದಾಗುತೈತಿ
ಬಾರೆ ಮನೆಗ್ಹೋಗಾನ
ಆತ್ತಲಿಂದ ನೀ ಬಂದೆ ಇತ್ತಲಿಂದ ನಾನು ಬಂದೆ
ನಿನ್ನ ವಾರಿಮುಸುಕು ತೆಗೆಯೆ
ಮೋರೆಯ ನೋಡಾನ  ।। ಎಲೆ ।।

ನನ್ನಿಂದ ಮನ್ನಿಂದ ನಿನ್ನ ಮ್ಯಾಗಳ ಗ್ಯಾನ
ಸುಣ್ಣದ ನೆವ ಮಾಡಿ ಸುಳಿದಾಡು ಮನೆ ಮುಂದೆ
ಬಾರೋ ಮನೆಗ್ಹೋಗಾನ
ನಡುವಿನ ಒಡ್ಯಾಣ ಮಾಡಿಸಿಕೊಡುವೆನು
ಚೆನ್ನಿ ನಿನ್ನ ಕೈಗೆ ಹಿಡಿಯೊನ್ನ ಕೊಟ್ಟೇನು ।। ಎಲೆ ।।

ಅಕ್ಕ ತಂಗೀರು ನಾವು ರೊಕ್ಕ ಕೇಳುವರಲ್ಲ
ನನ್ನ ಗ್ಯಾನ ಬಿತ್ತಲ್ಲ ನಿನಮ್ಯಾಲೆ
ಬಾರೋ ಮನೆಗ್ಹೋಗಾನ
ಮಾಗಿ ಒಡೆದರೆ ಹಂಟೆ ಜಾಲಿ ಕಡಿದಾರೆ ಕೆಚ್ಚಿ
ನಿನ್ನಗಲ್ಲವ ಕಡಿದಾರೆ ಬೆಲ್ಲದೊಂದಚ್ಚಿ ।। ಎಲೆ ।।



 🌸ಭಾಗ್ಯದ ಬಳೆಗಾರ 🌸



ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

ನಿನ್ನ ತವರೂರಾ ನಾನೇನು ಬಲ್ಲೆನು
ನಿನ್ನ ತವರೂರಾ ನಾನೇನು ಬಲ್ಲೆನು
ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ಗೋತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
ತೋರಿಸು ಬಾರೆ ತವರೂರ

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
ಅಲ್ಲಿಹುದೆನ್ನಾ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
ಅಲ್ಲಿಹುದೆನ್ನಾ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
ನವಿಲು ಸಾರಂಗ ನಲಿದಾವೇ ಬಳೆಗಾರ
ಅಲ್ಲಿಹುದೆನ್ನಾ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರಾಹಾಸಿ
ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
ಅವಳೆ ಕಣೋ ನನ್ನ ಹಡೆದವ್ವ

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ಕೊಂಡು ಹೋಗೊ ನನ್ನ ತವರೀಗೆ

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ


 🌸ಕಲಿತ ಹುಡಿಗಿ 🌸


ಗಾಯನ: ಗುರುರಾಜ್ ಹೊಸಕೋಟೆ

ಕಲಿತ ಹುಡುಗಿ ಕುದ್ರಿ ನಡಿಗಿ ನಡೆದ ಬರತಿತ್ತ
ಕಲಿತ ಹುಡುಗಿ ಚಿಗರಿ ನಡಿಗಿ ಬಳುಕಿ ಬರತಿತ್ತ
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ...
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ... ನಿದ್ದಿ ಹಾರಿ ಹೋತ....
|| ಕಲಿತ ಹುಡುಗಿ ||

ಏಣಿ ಹತ್ತಿ ವೆಂಕಟರಮಣಾ ಸುಣ್ಣ ಬಳಿಯುತಿದ್ನಾ..
ಈ ಚಮಕ್ಕು ರಾಣಿಯ....
ಈ ಚಮಕ್ಕು ರಾಣಿಯ.... ಹೀಲ್ಸಿನ ಸದ್ದಿಗೆ ಬಗ್ಗಿ ನೋಡಿಬಿಟ್ನಾ..
ಕಂಡಿದ್ರೆ ತಾನೆ ಆ ಬಡ ಜೀವಾ ಇಂತ ಅಂದ ಚಂದ
ಸೈಡು ಹೊಡೆಯೋಕೋಗಿ ಮೋರಿ ಸೈಡು ಜಾರಿ ತಡಕ್ಕ್ ಅಂತ ಬಿದ್ನಾ...
|| ಕಲಿತ ಹುಡುಗಿ ||

ಘಮ ಘಮ ಸೆಂಟನ್ನು ಹಚ್ಚಿಕೊಂಡ ಇವಳು ಕುಣಿಸುತ್ತಿದ್ಳು ಸೊಂಟ
ತಡೆಯೋಕಾಗದೆ...
ತಡೆಯೋಕಾಗದೆ... ಮೆಳ್ಳಗಣ್ಣ ಸೀನ ಹಿಂದೆ ಹೊಂಟೆ ಬಿಟ್ನಾ
ಹತ್ತಿರೊ ಸೈಕಲ್ ಪಂಚರ್ ಆದರೂ ಓಡ್ಸೋದು ಬಿಡಲಿಲ್ಲ
ಲೈಟು ಕಂಬಕ್ಕೆ ಡಿಚ್ಚಿ ಹೊಡೆದೆಬಿಟ್ಟ ಹಲ್ಲು ಉಳಿಯಲಿಲ್ಲ....
|| ಕಲಿತ ಹುಡುಗಿ ||

ಕಟ್ಟೆ ಮ್ಯಾಲೆ ಕೂತುಕೊಂಡ ಸೇಠು ಹೇಳುತಿದ್ನ ಜೋಕು
ಪಕ್ಕ್ ದಲ್ಲಿ ಮೋನಾ ಡಾರ್ಲಿಂಗ್...
ಮೋನಾ ಡಾರ್ಲಿಂಗ್... ಹಾದು ಹೋದಳು ಹಾರ್ತಾ ಇತ್ತು ಪ್ರಾಕು
ಮೈಮ್ಯಾಲೆ ಕಿರಿಕ್ಕು ಎಳಕೊಂಡ ಸೇಠು ಮರ್ತೆ ಬಿಟ್ನ ಜೋಕು
ಪ್ಯಾರಾಚೂಟು ಪ್ರಾಕಿಗೆ ಆಗೆಬಿಟ್ಟ ಕ್ರ್ಯಾಕು ಸೆಮಿಕ್ರ್ಯಾಕು
|| ಕಲಿತ ಹುಡುಗಿ ||


🌸ಕೋಲು ಕೋಲಣ್ಣ ಕೋಲೆ 🌸

ಕೋಲು ಕೋಲೆ
ಕೋಲು ಕೋಲಣ್ಣ ಕೋಲೆ

ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ
ಮಲ್ಲಯ್ಯ ಮಡದಿ ಮರುಗಮ್ಮlಇರುವುದು
ಕಲ್ಲು ಮಾಳಿಗೆ ಕೈ ಕೆಲಸ ll

ಮಲ್ಲಯ್ಯ ಶಿವನೀ ವೆಲ್ಲಿಗ ಬಿಟ್ರೆ
ಮಲ್ಲಿಗೇ ಬೆಳಗೋ ಮತಿಘಟ್ಟನೆlರಾಮಂದ್ರೇ
ಬೆಳಗಾಗಿ ಬಿಟ್ಟು ಪರುಸೇಯ ll

ಓಕ್ಕಾಲು ಉರುಗೆಜ್ಜೆ ಒಕ್ಕಾರ ಕಿರುಗೆಜ್ಜೆ
ಚೊಕ್ಕಾ ಬೆಳ್ಳಿಲೀ ಮಕರಂಭ
ಚೊಕ್ಕಾ ಬೆಳ್ಳಿಲಿ ಮಕರಂಭlಕೀಲ ಕುದುರೆ
ಒಕ್ಕಾವು ಮಾರ್ನೋಮಿ ಪೌಜೀಗೆ ll

ಆನೆಶೃಂಗಾರವಾಗಿ ಅಂಗಾಳದಗೈದಾವೆ
ಜಾಣ ತಾನೇಕೆ ಹೊರಟಾನೆ
ಜಾಣ ತಾನೇಕೆ ಹೊರಟಾನೆlಲೋ ನಿನ್ನ
ಡೋಲು ಲಾಲಿಲಿ ಕರೆದಾವೇ ll



🌸ತವರೂರ ಮನೆ ನೋಡ...🌸

ತವರೂರ ಮನೆ ನೋಡ ಬಂದೇ
ತಾಯಿ ನೆನಪಾಗಿ ಕಣ್ಣೀರ ತಂದೆ

ಹತ್ತು ಹದಿನಾರು ವರುಷಗಳಲ್ಲಿ
ಹೆತ್ತ ತಾಯ್ ತಂದೆಗಳ ಪ್ರೀತಿಯಲ್ಲಿ
ಮುತ್ತಿನಂತೆ ಜೋಪಾನಾಗಿ ಬಾಳಿದೆ
ಅದು ಎತ್ತ ಹೋದರು ಕನಸಾಗಿದೆ llತವರೂರll

ಬಾಗಿಲ ಮುಂದೇ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ
ಹೇಗೆ ಮರೇಯಲಿ ಅದ ಮನಸ್ಸಿನಲ್ಲಿ
ಅದು ಮರೇಯದು ಈ ಬಾಳಿನಲ್ಲಿ ll

ಅಣ್ಣನ ಹೆಂಡತಿ ಖೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತಾಡಿಸದೆ ಒಳಗೋಡಿದ
ತನ್ನ ಸಿರಿಯಲ್ಲೇ ತಾನೊಡಗೂಡೀದ
llತವರೂರll

ಅತ್ತೀಗೆ ಕೈಗೊಂಬೆ ಅಣ್ಣ
ಎತ್ತಿ ಆಡಿಸಿದ ತಂಗೀಯ ಮರೆತ
ಕಣ್ಣ ಮೇಲೆತ್ತಿ ಸಹ ನೋಡಬಾರದೇ
ಇತ್ತ ಬಾರಮ್ಮ ತಂಗಿ ಎನಬಾರದೆll

ಶಿವನೇ ಕೈ ಮುಗಿದು ಬೇಡೂವೆ
ತವರ ಸಿರಿ ಬೆಳೆದು ಬರಲಿ ನಮ್ಮಣ್ಣಗೇ
ಸುಖ ಸಂಪತ್ತು ಕೊಡು ನಮ್ಮಣ್ಣಗೆ
ಕಾಯಿ ಕರ್ಪೂರ ಬೆಳಗೂವೆ ನಿನಗೇ
llತವರೂರll


 🌸ಕೊಟ್ಟಾರೆ ಕೊಡು ಶಿವನೆ🌸

ಕೊಟ್ಟಾರೆ ಕೊಡು ಶಿವನೆ
ಕುಡುಕನಲ್ಲದ ಗಂಡನ l

ಕೆಟ್ಟ ಚಾಳಿ ಇಲ್ಲದ
ಒಟ್ಟಾರೆ ಗುಣವಂತನl

ಸಾರಾಯಿ ಸಹವಾಸ ಚಟವೊಂದು ಇರುವೋನು
ಇರುಳು ಕುಡಿದು ಬಂದು ಬಡಿದು ಬೈದಾಡುವನು
ಹೆತ್ತ ಮಕ್ಕಳು ಎಂದು ಆದಾರು ಬೀದಿ ಪಾಲು
ಆದೀತು ಎನ್ನ ಬಾಳು ನೆರೆ ಹೊರೆಯ ಬಾಯಿ ಪಾಲು
ಕಂಡ ಹೆಣ್ಣನು ಕಂಡು ಬಾಯಿ ಬಾಯಿ ಬಿಡುವೋನು
ಅಕ್ಕ ತಂಗೀರ ಭೇದ ತಾ ಎಂದು ಮಾಡನು
ಮುದ್ದಿನ ಮಡದಿಯ ಕಣ್ಣೆತ್ತಿ ನೋಡಾನು
ಮೂರೊತ್ತು  ಸೂಳೇರ ಸಹವಾಸದಿ ಕಳೇದಾನು llಕೊಟ್ಟಾರೆll

ಜಿಪುಣ ಬುದ್ಧಿಯ ಗಂಡ ನನಗೆಂದು ಸಿಗದಿರಲಿ
ಹೆಂಡತಿ ಮಕ್ಕಳುಣುವ ಅನ್ನ ಲೆಕ್ಕ ಹಾಕಾನು
ಕಾಯಿ ಲೆಕ್ಕ ಸಾಲೆಯು ತರಲು ಖರ್ಚು ಮಾಡದೆ
ನಡುವೆಯೇ ಸತ್ತೆನ್ನ ವಿಧವೆಯ ಮಾಡಾನು
ಒಪ್ಪತ್ತಿನ ಗಂಜಿ ಇರಲಿ ಮೈಮೇಲೆ  ಚಿಂದಿ ಇರಲಿ
ನಾನು ನನದೆಂಬ ಅಭಿಮಾನ ಒಂದಿರಲಿ ಸುಖದ  ಸಿರಿಯು ಬೇಡ ನಗ ನಾಣ್ಯವೂ ಬೇಡ
ನಗು ನಗುತ ಬಾಳ ಸರಿಸೋ ಗಂಡನ ನೀಡೋ llಕೊಟ್ಟಾರೆll


🌸ಅಮ್ಮಾನ ಮನೆಯಿಂದ 🌸

ಅಮ್ಮಾನ ಮನೆಯಿಂದ ಅತ್ತೇಯ  ಮನೆಗೋಗಿ ಮುತ್ತಂತೆ ಬಾಳು ನನ್ನ ತಂಗಿ ಮುತ್ತಿನುಂಗುರದ ಮಣಿಯಾಗಿ ll

ಮರಿಬೇಡ ತವರೂರು  ವರ್ಷಕ್ಕೆ ಒಮ್ಮೆ ತೇರು
ಕಷ್ಟ ಇರಲಿ ನೂರು ಮರಿಬೇಡ ಅಣ್ಣನ ಸೂರು llಅಮ್ಮಾನll

ನೆರೆಮನೆ ಸಂಗ ಬೇಡ ಅದು ವಿರಸಕ್ಕೆ ದಾರಿ ನೋಡ
ಕೈಯೊಳಗಿರಲಿ ಮನಸು ಕಾಣಬೇಡ ಹುಚ್ಚು ಕನಸು llಅಮ್ಮಾನll

ನಗ್ ನಗ್ತಾ ಹೇಳೋರೆಲ್ಲಾ ನಿನ್ನ ಕಷ್ಟಕ್ಕೆ ಬರುವರಿಲ್ಲ
ಎದೆಯೊಳಗಿರಲಿ ಭೀತಿ ಮೆರೆಯದೆ ಎಂದಿಗೂ ನೀತಿllಅಮ್ಮಾನll

ಸುತ್ತೆಲ್ಲ ಕಣ್ಣಿರಲಿ ನಿನ್ನ ಮಾತಲ್ಲಿ ಮಿತಿಯಿರಲಿ
ಪಡದಿರು ಎಂದಿಗು ಅನುಮಾನ ಬಿಡದಿರು ನಿನ್ನ ಬಿಗುಮಾನ llಅಮ್ಮಾನll


🌸ಆಷಾಢ ಮಾಸ 🌸

ಆಷಾಢ ಮಾಸ ಬಂದಿತಮ್ಮ
ಅಣ್ಣ ಬರಲಿಲ್ಲ ಕರಿಯಾಕ
ಸುವ್ವಲಾಲೀ ಸುವ್ವಾಲಿ ll

ಹೊತ್ತು ಮುಳುಗಿ ಕತ್ತಲಾಗಿ
ದೀಪ ಹಚ್ಚೋ ವೇಳೆಯಾಗಿ
ಅಣ್ಣ ಬರಲಿಲ್ಲ ಕರಿಯಾಕ
ಸುವ್ವಲಾಲಿ ಸುವ್ವಾಲಿ llಆಷಾಢll

ರೊಟ್ಟಿ ಬುತ್ತಿ ಮಾಡಿಕೊಂಡು
ಎತ್ತಿನ ಬಂಡಿ ಹೂಡಿ ಕೊಂಡು
ಎಂದು ಹೊಗೇನಾ ತವರೀಗೆ
ಸುವ್ವಲಾಲಿ ಸುವ್ವಾಲಿ llಆಷಾಢll

ಹಿಂದಿನ ಹೊತ್ತು ಹಿಂದೇ ಇರಲಿ
ಮುಂದಿನ ಹೊತ್ತು ಇಂದೇ ಬರಲಿ
ಎಂದು ನೋಡೇನಾ ತಾಯಿಯ ಮೋರೆ
ಸುವ್ವಾಲಾಲಿ ಸುವ್ವಾಲಿ llಆಷಾಢll

-ಜಾನಪದ